ಉಷ್ಣಪರಿವರ್ತನೆ

ಯಾವುದೇ ಪದಾರ್ಥಕ್ಕೆ ಉಷ್ಣ ಒದಗಿಸಿ ಅದನ್ನು ಬೇರೆ ಪದಾರ್ಥ ಅಥವಾ ಪದಾರ್ಥಗಳಾಗಿ ಪರಿವರ್ತಿಸುವ ಕ್ರಿಯೆ (ಪೈರಾಲಿಸಿಸ್). ಉಷ್ಣದೊಂದಿಗೆ ಬೇರೊಂದು ಪದಾರ್ಥವನ್ನೂ ಒದಗಿಸಿ ರಾಸಾಯನಿಕ ಪರಿವರ್ತನೆ ಉಂಟುಮಾಡಿದರೆ ಅದು ಉಷ್ಣಪರಿವರ್ತನೆ ಎನಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ಪದಾರ್ಥವನ್ನು ಆಕ್ಸಿಜನ್ನಿನೊಂದಿಗೆ ಕಾಯಿಸಿದರೆ ಆಗಬಹುದಾದ ಪರಿವರ್ತನೆಗೆ ದಹನ (ಕಂಬಸ್ಚನ್) ಎಂದೂ ಹೈಡ್ರೋಜನ್ನಿನೊಂದಿಗೆ ಕಾಯಿಸಿದರೆ ಆಗಬಹುದಾದ ಪರಿವರ್ತನೆಗೆ ಹೈಡ್ರೋಜನೀಕರಣ (ಹೈಡ್ರಾಜಿನೇಷನ್) ಎಂದೂ ಹೆಸರು. ಆದರೆ ಹಾಗೆ ಒದಗಿಸಿದ ಪದಾರ್ಥ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದೆ ಕೇವಲ ದ್ರಾವಕವಾಗಿ (ಸಾಲ್ವೆಂಟ್) ಅಥವಾ ವೇಗವರ್ಧಕವಾಗಿದ್ದುಕೊಂಡು (ಕೆಟಲಿಸ್ಟ್) ಪರಿವರ್ತನೆಗೆ ನೆರವು ನೀಡಿದರೆ ಆಗಲೂ ಆ ಕ್ರಿಯೆ ಉಷ್ಣಪರಿವರ್ತನೆಯೇ. ಈ ಬಗೆಯ ಕ್ರಿಯೆಯಿಂದ ಉಂಟಾಗುವ ಪದಾರ್ಥಗಳೇನಿದ್ದರೂ ಮೂಲಪದಾರ್ಥದಲ್ಲಿನ ಅಣುಪರಮಾಣುಗಳ ಪುನರ್ಯೋಜನೆಯಿಂದ ಉಂಟಾದವು.

ಪದದ ಮೂಲ ಅರ್ಥಕ್ಕೆ ಪ್ರಾಶಸ್ತ್ಯ ನೀಡಿ ಉಷ್ಣದ ಸಹಾಯದಿಂದ ಯಾವ ಪದಾರ್ಥವನ್ನು ಪರಿವರ್ತಿಸಿದರೂ ಆ ಕ್ರಿಯೆಗೆ ಉಷ್ಣಪರಿವರ್ತನೆ ಎನ್ನಬಹುದು. ಆದರೆ ಸಾಮಾನ್ಯವಾಗಿ ಈ ಪದವನ್ನು ಬಳಸುವುದು ನೈಸರ್ಗಿಕವಾಗಿ ದೊರೆಯುವ ಸಂಕೀರ್ಣ ಇಂಗಾಲೀಯ ಪದಾರ್ಥಗಳ ವಿಷಯದಲ್ಲಿ ಮಾತ್ರ. ಪರಿವರ್ತನೆ ಹೊಂದುವ ಪದಾರ್ಥ ಒಂದೇ ಒಂದು ನಿರ್ದಿಷ್ಟ ಸಂಯುಕ್ತವಾಗಿದ್ದು, ಅದು ಕಾಯಿಸಿದಾಗ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳಾಗಿ ಒಡೆದರೆ ಆ ಕ್ರಿಯೆಯನ್ನು ಉಷ್ಣವಿಭಜನೆ (ಥರ್ಮಲ್ ಡೀಕಾಂಪೋಸಿಷನ್) ಎನ್ನುವುದು ವಾಡಿಕೆ. ಔದ್ಯೋಗಿಕ ಕ್ಷೇತ್ರದಲ್ಲಿ ಇಂದು ಉಷ್ಣಪರಿವರ್ತನೆಗೆ ಗುರಿಪಡಿಸುವ ಪದಾರ್ಥಗಳೆಂದರೆ ಮುಖ್ಯವಾಗಿ ಕಲ್ಲಿದ್ದಲು, ಮರ, ಕಲ್ಲೆಣ್ಣೆ (ಪೆಟ್ರೊಲಿಯಂ) ಮತ್ತು ನಿಸರ್ಗಾನಿಲ.
ಔದ್ಯೋಗಿಕ ಪ್ರಾಮುಖ್ಯವುಳ್ಳ ಉಷ್ಣಪರಿವರ್ತನ ವಿಧಾನಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಉಷ್ಣತೆಯನ್ನು ಉಪಯೋಗಿಸುತ್ತಿರುತ್ತಾರೆ. ಒತ್ತಡ ಕೆಲವು ಸಂದರ್ಭಗಳಲ್ಲಿ ಹೆಚ್ಚಿಸುವುದು ಮತ್ತೆ ಕೆಲವು ಸಂದರ್ಭಗಳ ಕಡಿಮೆ ಮಾಡುವುದೂ ಉಂಟು. ಉಷ್ಣ ಪರಿವರ್ತನೆಗೆ ಗುರಿಪಡಿಸುವ ಪದಾರ್ಥ ಘನಸ್ಥಿತಿಯಲ್ಲಿರಬಹುದು ದ್ರವಸ್ಥಿತಿಯಲ್ಲಿರಬಹುದು ಇಲ್ಲವೇ ಅನಿಲಸ್ಥಿತಿಯಲ್ಲೂ ಇರಬಹುದು.
ಕಲ್ಲಿದ್ದಲನ್ನು ಅಧಿಕ ಉಷ್ಣತೆಯಲ್ಲಿ (800ಲಿ-1000ಲಿ ಸೆ.) ಕಾಯಿಸುವುದೂ ಉಂಟು; ಕಡಿಮೆ ಉಷ್ಣತೆಯಲ್ಲಿ (500ಲಿ-800ಲಿ ಸೆ.) ಕಾಯಿಸುವುದೂ ಉಂಟು. ಅದರಿಂದ ಬರುವ ಮುಖ್ಯ ಉತ್ಪನ್ನಗಳು ಕೋಕ್, ಕಲ್ಲಿದ್ದಲ ಅನಿಲ ((ಕೋಲ್‍ಗ್ಯಾಸ್) ಮತ್ತು ಕಲ್ಲಿದ್ದಲು ಡಾಮರು (ಕೋಲ್‍ಟಾರ್). ಡಾಮರಿನಿಂದ ಬೆಂಜೀನ್, ಟಾಲ್ವೀನ್, ನ್ಯಾಫ್ತಲೀನ್, ಕ್ರೆಸಾಲುಗಳು ಮುಂತಾದ ರಾಸಾಯನಿಕಗಳನ್ನು ಬೇರ್ಪಡಿಸುತ್ತಾರೆ., ವರ್ಣದ್ರವಗಳು, ಔಷಧ ಪದಾರ್ಥಗಳು, ಪ್ಲಾಸ್ಟಿಕುಗಳು ಮುಂತಾದ ಅನೇಕ ಉಪಯುಕ್ತ ಪದಾರ್ಥಗಳ ತಯಾರಿಕೆಯಲ್ಲಿ ಈ ರಾಸಾಯನಿಕಗಳ ಉಪಯೋಗ ಇದೆ.
ಮರವನ್ನು ಉಷ್ಣಪರಿವರ್ತನೆಗೊಳಪಡಿಸುವುದು ಮುಖ್ಯವಾಗಿ ಇದ್ದಲಿನ ತಯಾರಿಕೆ, ಮೆಥೆನಾಲ್, ಅಸಿಟಿಕ್ ಆಮ್ಲ ಮತ್ತು ಅಸಿಟೋನುಗಳು ಇದರಲ್ಲಿ ಬರುವ ಮುಖ್ಯ ಉಪೋತ್ಪನ್ನಗಳು.

ಕಚ್ಚಾ ಕಲ್ಲೆಣ್ಣೆಯನ್ನಾಗಲೀ ಅದರ ಭಿನ್ನ ಆಸವನದಿಂದ (ಫ್ಯ್ರಾಕ್ಷನಲ್ ಡಿಸ್ಟಿಲೇಷನ್) ಒದಗಿಬರುವ ಯಾವುದಾದರೊಂದು ಅಂಶವನ್ನಾಗಲೀ ಉಷ್ಣಪರಿವರ್ತನೆಗೆ ಒಳಪಡಿಸುವುದಕ್ಕೆ ಭೇದನೆ (ಕ್ರ್ಯಾಕಿಂಗ್)ಎಂಬ ಹೆಸರಿದೆ. ಏಕೆಂದರೆ ಈ ಕ್ರಿಯೆಯಲ್ಲಿ ದೊಡ್ಡ ದೊಡ್ಡ ಹೈಡ್ರೋಕಾರ್ಬನ್ ಅಣುಗಳನ್ನು ಭೇದಿಸಿ ಚಿಕ್ಕ ಚಿಕ್ಕ ಹೈಡ್ರೋಕಾರ್ಬನ್ ಅಣುಗಳಾಗಿ ಮಾಡುವುದೇ ಮುಖ್ಯ ರಾಸಾಯನಿಕ ಬದಲಾವಣೆ. ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಹೆಚ್ಚು ಬೇಡಿಕೆ ಇರುವ ಪೆಟ್ರೋಲ್ ಅಥವಾ ಗ್ಯಾಸೊನಿನಲ್ಲಿರುವುದು ಅಂಥ ಚಿಕ್ಕ ಚಿಕ್ಕ ಹೈಡ್ರೊಕಾರ್ಬನ್ ಅಣುಗಳು, ಆದ್ದರಿಂದ ಈ ಭೇದನೆ ವಿಧಾನದಿಂದ ಪೆಟ್ರೋಲ್ ಉತ್ಪತ್ತಿಯನ್ನು ಹೆಚ್ಚಿಸಬಹುದು. ಉಷ್ಣಭೇದನೆಯಲ್ಲಿ (ಥರ್ಮಲ್ ಕ್ರ್ಯಾಕಿಂಗ್) 500ಲಿ ಸೆ. ನಿಂದ 600ಲಿ ಸೆ. ಉಷ್ಣತೆಯನ್ನೂ 40 ರಿಂದ 70 ವಾಯುಭಾರಗಳಷ್ಟು ಒತ್ತಡವನ್ನೂ ಉಪಯೋಗಿಸುತ್ತಾರೆ. ವೇಗವರ್ಧಕಭೇದನೆಯಲ್ಲಿ (ಕೆಟಿಲಿಟಿಕ್ ಕ್ರ್ಯಾಂಕಿಂಗ್) ರಾಸಾಯನಿಕ ಪರಿವರ್ತನೆಗೆ ನೆರವು ನೀಡಲು ವೇಗವರ್ಧಕವನ್ನು ಬಳಸುವುದರಿಂದ 450ಲಿ ಸೆ. ಉಷ್ಣತೆ ಮತ್ತು ಕೇವಲ 2-3 ವಾಯುಭಾರಗಳಷ್ಟು ಒತ್ತಡ ಸಾಕಾಗುತ್ತದೆ. ಪೆಟ್ರೋಲಿಯಂ ಭೇದನೆಯಿಂದ ಹೆಚ್ಚು ಪೆಟ್ರೋಲ್ ಉತ್ಪತ್ತಿಯಾಗುವುದರ ಜೊತೆಗೆ ಎಥಿಲೀನ್, ಪ್ರೊಪೈಲೀನ್, ಬ್ಯುಟೈಲೀನ್ ಮುಂತಾದ ಕೆಳ ಹೈಡ್ರೋಕಾರ್ಬನುಗಳು ಉಪೋತ್ಪನ್ನಗಳಾಗಿ ದೊರೆಯುತ್ತವೆ. ಇವುಗಳಿಂದ ಈಥೈಲ್ ಆಲ್ಕೊಹಾಲ್, ಗ್ಲೈಕಾಲ್, ಈಥರ್, ಪಾಲಿಥೀನ್, ಗ್ಲಿಸರಾಲ್, ಬ್ಯೂಟಾಡಯೀನ್ (ಕೃತಕ ರಬ್ಬರ್ ತಯಾರಿಕೆ) ಮುಂತಾದ ಅನೇಕ ಉಪಯುಕ್ತ ಪದಾರ್ಥಗಳನ್ನು ತಯಾರಿಸುತ್ತಾರೆ.

ನಿಸರ್ಗಾನಿಲದಿಂದ ಬೇರ್ಪಡಿಸಿದ ಮೀಥೇನ್, ಈಥೇನ್, ಪ್ರೊಪೇನ್ ಮತ್ತು ಬ್ಯೂಟೇನುಗಳನ್ನು ಉಷ್ಣಪರಿವರ್ತನೆಗೊಳಪಡಿಸಿದ ಇಂಗಾಲದ ಕಪ್ಪು, ಮೆಥನಾಲ್, ಫಾರ್ಮಾಲ್ಡಿಹೈಡ್, ಕ್ಲೋರೋಫಾರಂ ಮುಂತಾದ ಪ್ರಯೋಜನಕರ ಪದಾರ್ಥಗಳನ್ನು ಉಪಯೋಗಿಸುತ್ತಾರೆ.							     
 (ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ